Article by Dr.Srikanth Ramangoudar - Dharwad
'ವೈದ್ಯ ದೇವೋಭವ' ಎಂಬ ಮಾತು ಹೇಳಲಿಕ್ಕೆ ಅಥವಾ ಕೇಳಲಿಕ್ಕೆ ಬಹಳ ಚೆನ್ನಾಗಿದೆ ಆದರೆ ವೈದ್ಯರನ್ನೇ ಅದರ ಕುರಿತಾಗಿ ಕೇಳಿದಾಗ ಅದರ ವೇದನೆ , ಪಡುವ ಕಷ್ಟವನ್ನು ಇಲ್ಲಿ ಸಂಕ್ಷಿಪ್ತವಾಗಿ ಹೇಳಲಾಗಿದೆ.
ರೋಗಿಗಳು ರೋಗದಿಂದ ಪೀಡಿತರಾಗಿದ್ದಾಗ ವೈದ್ಯರು ಹಗಲು ರಾತ್ರಿ ಊಟ ನಿದ್ರೆ ,ಹೆಂಡತಿ ಮಕ್ಕಳು ಎನ್ನದೆ ತಕ್ಷಣ ಬಂದವರನ್ನು ನೋಡಿ ಸೂಕ್ತ ಚಿಕಿತ್ಸೆ ನೀಡಿ ಗುಣಪಡಿಸುತ್ತಾರೆ. ಆದ್ದರಿಂದಲೇ ಅವರನ್ನು ಕಣ್ಣಿಗೆ ಕಾಣೋ ದೇವರು ಎಂದು ಭಾವಿಸುತ್ತಾರೆ, ಆದರೆ ಅದೇ ವೈದ್ಯರುಗಳ ಕಷ್ಟಗಳನ್ನು ಯಾರೂ ಕೇಳುವವರಿಲ್ಲ ,ಅವರು ಯಾರ ಮೊರೆ ಹೋಗಬೇಕು? ಯಾರನ್ನು ಕೇಳಬೇಕು?
ಬೇರೆ ರಾಜ್ಯಗಳಿಗೆ ಹೋಲಿಸಿದರೆ (ಮಹಾರಾಷ್ಟ್ರ, ಕೇರಳ, ತಮಿಳುನಾಡು, ಗುಜರಾತ್) ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಗಳೆಂದರೆ ಜನರಿಗೆ ಭಯ ಅಲ್ಲ ಸರಿಯಾದ ವ್ಯವಸ್ಥೆಗಳಿಲ್ಲ , ಇದ್ದರೂ ಅದನ್ನು ಸರಿಯಾಗಿ ನೋಡಿಕೊಳ್ಳುವ ಅಧಿಕಾರಿಗಳಿಲ್ಲ. ಅಲ್ಲಿ ಉಚಿತ ಚಿಕಿತ್ಸೆ ನೀಡುವ ಬದಲು ಅಲ್ಲಿಯೇ ರೋಗಿಗಳಿಂದ ಹಣ ವಸೂಲಿ ಮಾಡಲಾಗುವುದು ಅದನ್ನು ಯಾರೂ ಕೇಳುವವರಿಲ್ಲ, ರಾಜಕೀಯ ಸಾಮಾಜಿಕ ಗಣ್ಯ ವ್ಯಕ್ತಿಗಳ ಹೆಸರು ಹೇಳಿ ತಿಂಗಳುಗಟ್ಟಲೆ ಉಚಿತ ಊಟ ಮಾಡುತ್ತ ದಾಖಲೆ (ಅಡ್ಮಿಷನ್) ಅವಶ್ಯಕತೆ ಇಲ್ಲದಿದ್ದರೂ ಅಲ್ಲಿಯೇ ಇರುತ್ತಾರೆ ಅವರುಗಳನ್ನು ವೈದ್ಯರು ನೋಡದಿದ್ದರೆ ಅವರಿಗೆ ಜೋರು (ಟಬರು) ಮಾಡುತ್ತಾರೆ, ಅವರ ಮೇಲೆ ದೈಹಿಕವಾಗಿಯೇ ಕೈ ಮಾಡುತ್ತಾರೆ, ಸರಿಯಾದ ಸೌಕರ್ಯಗಳಿಲ್ಲದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ದೊಡ್ಡ ಸರ್ಕಾರಿ ಆಸ್ಪತ್ರೆಗೆ ಹೋಗಲು ಹೇಳಿದರೂ ತೊಂದರೆ ಅಥವಾ ಅದರಿಂದ ರೋಗಿಗೆ ತೊಂದರೆಯಾದರೂ ವೈದ್ಯರಿಗೆ ಕಷ್ಟ ತಪ್ಪಿದ್ದಲ್ಲ . ಇದು ಸರ್ಕಾರಿ ಆಸ್ಪತ್ರೆಯ ವೈದ್ಯರ ಕಷ್ಟವಾದರೆ ಖಾಸಗಿ ಆಸ್ಪತ್ರೆಯ ವೈದ್ಯರ ಕಷ್ಟವಂತೂ ಕೇಳಲೇಬೇಡಿ.
ಸರ್ಕಾರ ಸರ್ಕಾರಿ ಆಸ್ಪತ್ರೆಯ ಸೌಕರ್ಯಗಳನ್ನು ಸುಧಾರಿಸುವ ಬದಲು ಎಲ್ಲ ಜವಾಬ್ದಾರಿಯನ್ನು ಖಾಸಗಿ ಆಸ್ಪತ್ರೆಗಳ ಮೇಲೆ ಹೇರಿ ಸುಮ್ಮನೆ ಕೈಕಟ್ಟಿ ಕುಳಿತಿದೆ. ಖಾಸಗಿ ಆಸ್ಪತ್ರೆಗಳಿಗೆ ಯಾವ ಸೌಕರ್ಯ ಅಥವಾ ಸಬ್ಸಿಡಿ ಕೊಟ್ಟಿದೆ ಎಂದು ಅದು ಆಸ್ಪತ್ರೆಗಳಲ್ಲಿ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡಲು ಹೇಳುತ್ತದೆ? ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರ ವಿಧಿಸಿದ ತೆರಿಗೆಯನ್ನು ತುಂಬುವಷ್ಟರಲ್ಲಿ ಸಾಕು ಸಾಕಾಗಿ ಹೋಗುತ್ತದೆ, ಅದಲ್ಲದೆ ಕಾರ್ಮಿಕರಿಗೆ ನಿಗದಿತ ಸಂಬಳವನ್ನೂ ಕೊಡಬೇಕು , ಅವರಾದರೂ ಕೊಡುವ ಸಂಬಳಕ್ಕೆ ಸರಿಯಾಗಿ ನಿಷ್ಠೆಯಿಂದ ದುಡಿದರೆ ಅದೇ ಆಸ್ಪತ್ರೆಯ ಮಾಲೀಕರಿಗೆ ಅದೃಷ್ಟವೇ ಸರಿ.
ಸರ್ಕಾರ ಮತಗಳಿಗೋಸ್ಕರ ಬಡವರು ಬಡವರು ಎಂದು ಅವರಿಗೆ ಕಡಿಮೆ ದರದಲ್ಲಿ ಇಡೀ ತಿಂಗಳಿಗೆ ಆಗುವಷ್ಟು ಸಾಮಗ್ರಿಗಳನ್ನು ಕೊಡುವುದರ ಬದಲು ಅವರಿಗೆ ಕೆಲಸ ಮಾಡಲು ಅವಕಾಶಗಳನ್ನು ಕಲ್ಪಿಸಿಕೊಟ್ಟರೆ ಅದು ಎಷ್ಟೋ ಉಪಯೋಗವಾದೀತು .ಹೊಟ್ಟೆ ಪಾಡಿಗಾಗಿ ದುಡಿಯುವ ಕಾರ್ಮಿಕನಿಗೆ ಉಚಿತವಾಗಿ ಊಟ ಕೊಟ್ಟರೆ ಯಾವ ಕಾರ್ಮಿಕ ತಾನೇ ನಿಷ್ಠೆಯಿಂದ ದುಡಿದಾನು? ಇದು ಸರ್ಕಾರಕ್ಕೆ ಏಕೆ ತಿಳಿಯುವುದಿಲ್ಲ ? ಸರಕಾರದ ಇಂತಹ ಯೋಜನೆಗಳಿಂದ ಎಷ್ಟೋ ಉದ್ಯಮಗಳು ಬಂದ್ ಆಗಿ ಅಭಿವೃದ್ಧಿ ಕುಂಠಿತವಾಗುತ್ತಿದೆ. ಇಂತಹ ಸಮಸ್ಯೆಗಳ ಸರಮಾಲೆಯನ್ನು ಹೆಗಲಲ್ಲಿ ಹೊತ್ತು ವೈದ್ಯರಿಗೆ ಅತೀ ಕಡಿಮೆ ದರದಲ್ಲಿ ಚಿಕಿತ್ಸೆ ನೀಡಿ ಎಂದು ಹೇಳಲು ಸರ್ಕಾರಕ್ಕೆ ಯಾವ ಅಧಿಕಾರವಿದೆ? ಉದ್ದಿಮೆಗಳ ಚಾಲನೆಗಾಗಿ ಎಲ್ಲದರಲ್ಲೂ ಸಬ್ಸಿಡಿ ನೀಡಲು ಸರ್ಕಾರ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿಲ್ಲ ?
ಆಸ್ಪತ್ರೆಗಳಿಗೂ ವಿದ್ಯುತ್ ದರದಲ್ಲಿ ತೆರಿಗೆಗಳಲ್ಲಿ (ರೋಗಿಗಳಿಗೆ ಚಿಕಿತ್ಸೆ ನೀಡಿದ ಸಂಖ್ಯೆಗಳ ಪ್ರಕಾರ) ಯಾಕೆ ವಿನಾಯಿತಿ ನೀಡಬಾರದು? ಎಷ್ಟೋ ಆಸ್ಪತ್ರೆಗಳು ಈ ತೆರಿಗೆಯನ್ನು ಭರಿಸಲಾಗದೆ ರೋಗಿಗಳ ಸಂಖ್ಯೆ ಗಳನ್ನು ನಿರ್ದಿಷ್ಟ ಮಾಡಿ ಕಡಿಮೆ ತೆರಿಗೆ ತುಂಬುತ್ತಿವೆ, ಹೀಗಾಗಿ ಎಷ್ಟೋ ರೋಗಿಗಳಿಗೆ ಸರಿಯಾದ ಸಮಯದಲ್ಲಿ ಸರಿಯಾದ ಚಿಕಿತ್ಸೆ ಸಿಗದೆ ಪರದಾಡುವಂತಾಗುತ್ತಿದೆ, ಇದಕ್ಕೆ ರೋಗಿಗಳು ಅವರಿಗೆ ಸಂಬಂಧಪಟ್ಟವರು ಆಸ್ಪತ್ರೆಗಳನ್ನು ಮತ್ತು ವೈದ್ಯರನ್ನು ಹೊಣೆಗಾರಿಕೆ ಮಾಡುವುದು ಯಾವ ನ್ಯಾಯ? ಸರ್ಕಾರ ಈ ವಿಷಯದಲ್ಲಿ ಚಿಂತಿಸಿ ಹೆಚ್ಚಿನ ರೋಗಿಗಳನ್ನು ನೋಡುವ ಆಸ್ಪತ್ರೆಗಳಿಗೆ ವಿದ್ಯುತ್ ನೀರು ಇತರ ವಿನಾಯಿತಿ ನೀಡಿದರೆ ತಾನಾಗಿಯೇ ಆಸ್ಪತ್ರೆಗಳು ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳನ್ನು ನೋಡಿ ಹೆಚ್ಚಿಗೆ ತೆರಿಗೆ ಭರಿಸುವುದರಿಂದ ಸರ್ಕಾರಕ್ಕೂ ಹಾಗೂ ಜನರಿಗೂ ಲಾಭ. ವೈದ್ಯರೂ ಕೂಡ ಯಾವ ತಕರಾರಿಲ್ಲದೆ 'ವೈದ್ಯ ದೇವೋ ಭವ''' ಎಂಬ ಉಕ್ತಿಯಂತೆ ತಮ್ಮ ಕಾರ್ಯವನ್ನು ಸರಾಗವಾಗಿ ಮಾಡಬಹುದು. ಸರ್ಕಾರ ಈ ಕುರಿತು ಆಲೋಚಿಸಿ ಕ್ರಮಕೈಗೊಂಡರೆ ಆರೋಗ್ಯ ಚಿಕಿತ್ಸೆಯಲ್ಲಿ ನಮ್ಮ ರಾಜ್ಯ ಮೊದಲ ಸ್ಥಾನ ಪಡೆಯುವುದರಲ್ಲಿ ಸಂಶಯವೇ ಇಲ್ಲ .
ಡಾ. ಶ್ರೀಕಂಠ ರಾಮನಗೌಡರ
ಧಾರವಾಡ
Share: